ಚೇಂಬರ್ಲಿನ್, ಥಾಮಸ್ ಕ್ರೌಡರ್
1843-1928. ಅಮೆರಿಕನ್ ಭೂವಿಜ್ಞಾನಿ ಹಿಮಾಶ್ಮಗಳ (ಗ್ಲೇಷಿಯರ್ಸ್) ಬಗ್ಗೆ ಸಂಶೋಧನೆ ಮಾಡಿದ. ಅದರಿಂದ ಪ್ರೇರಿತನಾಗಿ ಭೂಮಿಯ ಇತಿಹಾಸದಲ್ಲಿ ಆಸಕ್ತಿ ತಳೆದು, ಭೂಮಿ ಮತ್ತು ಇತರ ಗ್ರಹಗಳ ಹುಟ್ಟಿನ ಬಗ್ಗೆ ಒಂದು ಸಿದ್ಧಾಂತವನ್ನೇ ಮಂಡಿಸಿ ಪ್ರಸಿದ್ಧನಾದ. ಜನನ 1843ರ ಸೆಪ್ಟೆಂಬರ್ 25ರಂದು ಇಲಿನಾಯ್ ಸಂಸ್ಥಾನದ ಮಟೂನ್ ಎಂಬಲ್ಲಿ. ವಿಸ್ಕಾನ್ಸಿನ್ ಸಂಸ್ಥಾನದ ಬೆಲಾಯಿಟ್ ನಗರದಲ್ಲಿರುವ ಬೆಲಾಯಿಟ್ ಕಾಲೇಜಿನಲ್ಲಿ ಶಿಕ್ಷಣ. ಪದವೀಧರನಾದದ್ದು 1866ರಲ್ಲಿ. ಕೆಲಕಾಲ ಮಿಚಿಗನ್ ಮತ್ತು ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡುತ್ತಿದ್ದು 1873ರಲ್ಲಿ ತನ್ನ ವಿದ್ಯಾಮಾತೆಯಾದ ಬಿಲಾಯಿಟ್ ಕಾಲೇಜಿಗೆ ಹಿಂತಿರುಗಿ ಅಲ್ಲಿ ಭೂವಿಜ್ಞಾನದ ಪ್ರಾಧ್ಯಾಪಕನಾದ. 1876ರ ವರೆಗೆ ವಿಸ್ಕಾನ್ಸಿನ್ ಸಂಸ್ಥಾನದ ಸಹಾಯಕ ಭೂವಿಜ್ಞಾನಿಯಾಗಿಯೂ ಕೆಲಸ ಮಾಡಿದ. ಆ ವರ್ಷ ವಿಸ್ಕಾನ್ಸಿನ್ ಭೂವೈಜ್ಞಾನಿಕ ಸರ್ವೆಯ ಪ್ರಧಾನ ಭೂವಿಜ್ಞಾನಿಯಾಗಿ ನೇಮಕಗೊಂಡ. ಆ ಸ್ಥಾನದಲ್ಲಿ ಆರು ವರ್ಷ ಕೆಲಸ ಮಾಡಿ 1882ರಲ್ಲಿ ಸಂಯುಕ್ತ ಸರ್ಕಾರದ ಸೇವೆಯನ್ನು ಕೈಗೊಂಡು ಅಮೆರಿಕದ ಸಂಯುಕ್ತಸಂಸ್ಥಾನಗಳ ಭೂವೈಜ್ಞಾನಿಕ ಸರ್ವೆಯ ಹಿಮಾಶ್ಮ ವಿಭಾಗದ ಭೂವಿಜ್ಞಾನಿಯಾಗಿ ಅಧಿಕಾರ ವಹಿಸಿಕೊಂಡ. ಇಲ್ಲಿ ಐದು ವರ್ಷ ಕಾಲ ಕೆಲಸಮಾಡಿದ. ತರುವಾಯ 1887ರಲ್ಲಿ ಮ್ಯಾಡಿಸನಿನಲ್ಲಿರುವ ವಿಸ್ಕಾನ್ಸಿಸ್ ವಿಶ್ವವಿದ್ಯಾಲಯದ ಅಧ್ಯಕ್ಷನಾದ. ಅಲ್ಲಿಂದ ಐದು ವರ್ಷಗಳ ಬಳಿಕ 1892ರಲ್ಲಿ ಷಿಕಾಗೋ ವಿಶ್ವವಿದ್ಯಾಲಯದ ಭೂವಿಜ್ಞಾನ ಇಲಾಖೆಯ ಮುಖ್ಯಸ್ಥನಾಗಿ ನೇಮಕಗೊಂಡು, ಇಪ್ಪತ್ತೇಳು ವರ್ಷಕಾಲ, ಅಂದರೆ 1919ರ ವರೆಗು ಆ ಸ್ಥಾನದಲ್ಲಿದ್ದ. ಆ ವರ್ಷ ಅಲ್ಲಿಂದ ನಿವೃತ್ತನಾದರೂ ಎಮೆರಿಟಸ್ ಪ್ರಾಧ್ಯಾಪಕನಾಗಿ ಅಲ್ಲಿಯೇ ಮುಂದುವರಿದ. 1928ರ ನವೆಂಬರ್ 15ರಂದು ಷಿಕಾಗೊ ನಗರದಲ್ಲಿ ನಿಧನ ಹೊಂದಿದ.

	1878ರಲ್ಲಿ ಸ್ವಿಟ್‍ಜûರ್ಲೆಂಡಿನಲ್ಲಿಯೂ 1894ರಲ್ಲಿ ಗ್ರೀನ್ಲೆಂಡಿನಲ್ಲಿಯೂ ಹಿಮಾಶ್ಮಗಳ ಅಧ್ಯಯನವನ್ನು ಕೈಗೊಂಡ ಚೇಂಬರ್ಲಿನ್ ಕ್ರಮೇಣ ಭೂಗ್ರಹದ ಇತಿಹಾಸದಲ್ಲಿ ಆಸಕ್ತನಾದ. ಹಿಮಾಶ್ಮಗಳ ಕ್ರಿಯೆಯಿಂದ ರೂಪುಗೊಂಡ ನಿಕ್ಷೇಪಗಳ ಅಧ್ಯಯನ ಮಾಡಿ ಯುಗ ಯುಗಾಂತರಗಳಲ್ಲಿ ವಾಯುಗುಣ ಯಾವ ಯಾವ ರೀತಿ ಬದಲಾಯಿಸಿದೆಯೆಂಬ ಬಗ್ಗೆ ಅಭಿಪ್ರಾಯವನ್ನು ಮಂಡಿಸಿದ. ಭೂಮಿಯ ಮೇಲೆ ಜೀವ ಮೊತ್ತ ಮೊದಲು ಮಣ್ಣಿನಲ್ಲಿ ಉದ್ಭವಿಸಿತೆಂಬ ಒಂದು ವಾದವನ್ನು ಮುಂದಿಟ್ಟ. 1899ರಲ್ಲಿ ಷಿಕಾಗೊ ವಿಶ್ವವಿದ್ಯಾಲಯವನ್ನು ಅಧ್ಯಾಪಕನಾಗಿ ಸೇರಿದ ಖಗೋಳವಿಜ್ಞಾನಿ ಎಫ್.ಆರ್. ಮಾಲ್ಟನಿನೊಂದಿಗೆ ಭೂಗ್ರಹದ ಉಗಮವನ್ನು ಕುರಿತ ಪರಿಶೀಲನೆಯನ್ನು ಕೈಗೊಂಡ. ಅದರ ಫಲವಾಗಿ ಮರುವರ್ಷ 1900ರಲ್ಲಿ ಅವರಿಬ್ಬರೂ ಸೇರಿ ಒಂದು ಸಿದ್ಧಾಂತವನ್ನು ಪ್ರತಿಪಾದಿಸಿದರು. ಸುಮಾರು ಒಂದೂವರೆ ಶತಮಾನಗಳಷ್ಟು ಮುಂಚೆ ಫ್ರಾನ್ಸಿನ ಪ್ರಕೃತಿ ವಿಜ್ಞಾನಿ ಬ್ಯೂಫಾನ್ ಪ್ರತಿಪಾದಿಸಿದ ಸಿದ್ಧಾಂತದ ಪರಿಷ್ಕøತ ರೂಪವೆಂದು ಪರಿಗಣಿಸಬಹುದಾದ ಅವನ ಸಿದ್ಧಾಂತದ ಪ್ರಕಾರ ಆಕಸ್ಮಿತವಾಗಿ ಸೂರ್ಯನನ್ನು ಸಮೀಪಿಸಿದ ಒಂದು ನಕ್ಷತ್ರ ಆಕರ್ಷಣೆಯ ಫಲವಾಗಿ ಸೂರ್ಯನ ಮೈಮೇಲಿನಿಂದ ಒಂದು ಬೃಹತ್ತಾದ ಅನಿಲರಾಶಿ ಎದ್ದು ಸೂರ್ಯನನ್ನು ಸುತ್ತು ಹಾಕಲು ಪ್ರಾರಂಭಿಸಿತು. ಅದು ಆರುತ್ತ ಹೋದಂತೆ ಅದರಿಂದ ಅನೇಕಾನೇಕ ಚಿಕ್ಕ ಚಿಕ್ಕ ದ್ರವ್ಯರಾಶಿಗಳು ರೂಪುಗೊಂಡುವು. ಅವು ಇನ್ನೂ ಆರಿ ಅಸಂಖ್ಯಾತ ಘನಕಾಯಗಳಾದುವು. ಈ ರೀತಿ ಉತ್ಪತ್ತಿಯಾದ ಗ್ರಹಾಣುಗಳು (ಪ್ಲಾನೆಟಿಸಿಮಲ್ಸ್) ಪರಸ್ಪರ ಆಕರ್ಷಣೆಯಿಂದ ಒಂದುಗೂಡುತ್ತ ಹೋಗಿ ಇಂದಿನ ಗ್ರಹಗಳು ಜನ್ಮತಾಳಿದುವು.

	ಮೌಲ್ಟನ್-ಚೇಂಬರ್ಲಿನ್ ಸಿದ್ಧಾಂತದ ಒಂದು ಅಂಶಕ್ಕೆ ಈಗಲೂ ಮಾನ್ಯತೆ ಉಂಟು. ಚಿಕ್ಕ ಚಿಕ್ಕ ಘನಕಾಯಗಳು ಸಾಮಾನ್ಯ ಉಷ್ಣತೆಯಲ್ಲಿ ಒಂದರೊಡನೊಂದು ಸೇರಿಕೊಂಡು ಗ್ರಹಗಳು ರೂಪುಗೊಂಡುವೆಂಬುದು ಅನೇಕ ಆಧುನಿಕ ವಿಜ್ಞಾನಿಗಳ ಅಭಿಪ್ರಾಯ. ಆದರೆ ನಕ್ಷತ್ರವೊಂದರ ಆಕರ್ಷಣೆಯ ಫಲವಾಗಿ ಸೂರ್ಯನಿಂದ ಕಿತ್ತುಬಂದ ಭಾಗವೇ ಅದಕ್ಕೆ ಅಗತ್ಯವಾದ ವಸ್ತುವನ್ನು ಒದಗಿಸಿತೆಂಬ ವಾದಕ್ಕೆ ಈಗ ಮಾನ್ಯತೆ ಇಲ್ಲ. ಪ್ರಖ್ಯಾತ ಬ್ರಿಟಿಷ್ ಖಗೋಳವಿಜ್ಞಾನಿ ಜೇಮ್ಸ್ ಜೀನ್ಸ್ ಅಲ್ಲಿಂದ ಇಪ್ಪತ್ತು ವರ್ಷಗಳ ಬಳಿಕ ಈ ಅಭಿಪ್ರಾಯಕ್ಕೆ ಪುನರ್ಜನ್ಮ ನೀಡಿ ಪ್ರಬಲವಾಗಿ ಬೆಂಬಲ ನೀಡಿದನಾದರೂ ಅದಕ್ಕೆ ಹೆಚ್ಚಿನ ಮನ್ನಣೆ ದೊರೆತಿಲ್ಲ.

	ಚೇಂಬರ್ಲಿನ್ನನೇ ಸ್ಥಾಪಿಸಿದ 'ಜರ್ನಲ್ ಆಫ್ ಜಿಯಾಲಜಿ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಅನೇಕ ಲೇಖನಗಳೂ ಅಮೆರಿಕ ಸಂಯುಕ್ತ ಸಂಸ್ಥಾನದ ಭೂವೈಜ್ಞಾನಿಕ ಸರ್ವೆಯ ಹಿಮಾಶ್ಮ ವಿಭಾಗದ ವರದಿಗಳೂ ಅಲ್ಲದೆ ನಾಲ್ಕು ಸಂಪುಟಗಳ ವಿಸ್ಕಾನ್ಸಿನ್ ಸಂಸ್ಥಾನದ ಭೂವೈಜ್ಞಾನಿಕ ವೃತ್ತಾಂತ (ಜೀಯಾಲಜಿ ಆಫ್ ವಿಸ್ಕಾನ್ಸಿನ್) ಮತ್ತು ಮೂರು ಸಂಪುಟಗಳ ಭೂವಿಜ್ಞಾನದ ಒಂದು ಪ್ರಕರಣಗ್ರಂಥ (ಟ್ರೀಟೈಸ್ ಆನ್ ಜಿಯಾಲಜಿ)-ಇವುಗಳನ್ನೊಳಗೊಂಡಂತೆ ಚೇಂಬರ್ಲಿನ್ ಹಲವಾರು ಗ್ರಂಥಗಳನ್ನು ರಚಿಸಿದ್ದಾನೆ.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ